Skip to main content
MUNJANE BELAKU

ಮುಂಜಾನೆ ಬೆಳಕು

*ಅಕ್ಷರದಿಂದ ಆತ್ಮವಿಶ್ವಾಸದವರೆಗೆ… ವಿದ್ಯಾ ರೆಡ್ಡಿ ಅವರ ವಿಶಿಷ್ಟ ಪಯಣ*

*ಅಕ್ಷರದಿಂದ ಆತ್ಮವಿಶ್ವಾಸದವರೆಗೆ… ವಿದ್ಯಾ ರೆಡ್ಡಿ ಅವರ ವಿಶಿಷ್ಟ ಪಯಣ* image

ಸಾಹಿತ್ಯದ ಸೊಬಗು, ಸಮಾಜಮುಖಿ ಸೇವೆಯ ಹೆಜ್ಜೆ ಗುರುತು — ಶ್ರೀಮತಿ ವಿದ್ಯಾ ರೆಡ್ಡಿ


ಗೋಕಾಕ: ಸಾಹಿತ್ಯ, ಶಿಕ್ಷಣ, ಸಮಾಜಸೇವೆ, ಸಾಂಸ್ಕೃತಿಕ ಸಂಘಟನೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ತನ್ನದೇ ಆದ ಛಾಪು ಮೂಡಿಸಿರುವ ಗೋಕಾಕದ ಶ್ರೀಮತಿ ವಿದ್ಯಾ ರೆಡ್ಡಿ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಬರವಣಿಗೆಯನ್ನು ಕೇವಲ ಸಾಹಿತ್ಯದ ಅಭಿವ್ಯಕ್ತಿಯಾಗಿ ಕಾಣದೆ, ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ ಸಾಮಾಜಿಕ ಜವಾಬ್ದಾರಿಯನ್ನಾಗಿ ರೂಪಿಸಿಕೊಂಡಿರುವುದು ಅವರ ವಿಶೇಷತೆ.


ಎಂ.ಎ., ಬಿ.ಎಡ್., ಕೆ-ಸೆಟ್ ವಿದ್ಯಾರ್ಹತೆ ಹೊಂದಿರುವ ವಿದ್ಯಾ ರೆಡ್ಡಿ ಅವರು ಸತೀಶ ಶುಗರ್ಸ್ ಅಕಾಡಮಿ ಪದವಿ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪೌರಾಡಳಿತ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿರುವ ಅವರು ‘ಮಂಜು ಮುಸುಕಿದ ಹಾದಿ’ ಕಾದಂಬರಿ, ‘ಅಂದಗಾತಿ’, ‘ಜೀವಯಾನ’, ‘ಅಹಲ್ಯೆ’, ‘ನೆರಳಾಚೆಯ ನಕ್ಷತ್ರಗಳು’ ಕವನ ಸಂಕಲನಗಳು, ‘ಭಾವಬಿಂಬ’ ಚುಟುಕು ಸಂಕಲನ, ‘ಭಾವ ಬಂಧನ ಕೋಟೆ’, ‘ಒಂಟಿ ಹೆಜ್ಜೆ’ ಕಥಾ ಸಂಕಲನಗಳು, ‘ಅವಲೋಕನ’, ‘ಮಂಥನ’, ‘ಅಂತರಂಗ’ ಲೇಖನ ಸಂಕಲನಗಳು ಹಾಗೂ ‘ದೃಷ್ಟಿ’ ವಿಮರ್ಶಾ ಸಂಕಲನ ಸೇರಿದಂತೆ ಹಲವು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ‘ಅಂತರ್ಯಾಮಿ’ ಕಾದಂಬರಿಯೂ ಸೇರಿದಂತೆ ಹಲವು ಕೃತಿಗಳು ಅಚ್ಚಿನಲ್ಲಿವೆ.


ಅವರ ಸಾಹಿತ್ಯ ಸಾಧನೆಗೆ ಸಂದಿರುವ ಪ್ರಶಸ್ತಿಗಳ ಪಟ್ಟಿಯೂ ಗಮನಾರ್ಹವಾಗಿದೆ. ‘ಮಂಜು ಮುಸುಕಿದ ಹಾದಿ’ ಕಾದಂಬರಿಗೆ ಆಜೂರ ಪ್ರಶಸ್ತಿ ಹಾಗೂ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ, ‘ಅಂದಗಾತಿ’ ಕವನ ಸಂಕಲನಕ್ಕೆ ಕುದ್ಮಲ್ ರಂಗರಾವ ಪ್ರಶಸ್ತಿ, ‘ಭಾವಬಿಂಬ’ ಚುಟುಕು ಸಂಕಲನಕ್ಕೆ ದೇವನಾಮಪ್ರಿಯ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ. ಕನ್ನಡ ಸೇವೆಗಾಗಿ ಕನ್ನಡ ನಿಧಿ ಪ್ರಶಸ್ತಿ, ಸಮಾಜಮುಖಿ ಕಾರ್ಯಕ್ಕಾಗಿ ಬಸವ ಸೇವಾರತ್ನ, ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡ ಸಾಧಕ ರತ್ನ, ಕರುನಾಡ ಸಾಹಿತ್ಯ ರತ್ನ, ಚುಟುಕು ಸಿರಿ, ಜ್ಯೋತಿಬಾದಾಮಿ ದತ್ತಿ ನಿಧಿ ಪ್ರಶಸ್ತಿ, ಕರುನಾಡ ಮಹಿಳೆ ಸಬಲೇ ರಾಜ್ಯರತ್ನ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಲೇಖಕಮಣಿ, ಸಾಧನ ತಪಸ್ವಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗೆ ಸಂದಿವೆ.


‘ಭಾವಬಿಂಬ’ ಚುಟುಕು ಸಂಕಲನವನ್ನು ಸುವರ್ಣವಾಹಿನಿಯಲ್ಲಿ ಲೋಕಾರ್ಪಣೆಗೊಳಿಸಿ ‘ಸುವರ್ಣ ಸೂಪರ್ ಸ್ಟಾರ್’ ಎಂಬ ಬಿರುದನ್ನೂ ಅವರು ಪಡೆದಿದ್ದಾರೆ. ಶರಣ ಸಂಸ್ಕೃತಿ ಉತ್ಸವದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಂದ ಸನ್ಮಾನ ಸ್ವೀಕರಿಸಿರುವುದು ಅವರ ಸಾಧನೆಯ ಮತ್ತೊಂದು ಹೆಮ್ಮೆಯ ಕ್ಷಣ. ಡಿಡಿ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರು ‘ಮಂಜು ಮುಸುಕಿದ ಹಾದಿ’ ಕಾದಂಬರಿಯನ್ನು ಪರಿಚಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಇದೇ ಕಾದಂಬರಿ ಚಲನಚಿತ್ರವಾಗಿ ಬೆಳ್ಳಿತೆರೆಗೆ ಬರಲು ಸಜ್ಜಾಗಿರುವುದು ಗೋಕಾಕದ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.


ಸಾಹಿತ್ಯದ ಜೊತೆಗೆ ಸಂಘಟನಾ ಕ್ಷೇತ್ರದಲ್ಲಿಯೂ ವಿದ್ಯಾ ರೆಡ್ಡಿ ಅವರು ಸಕ್ರಿಯರಾಗಿದ್ದಾರೆ. ಜ್ಞಾನ ಮೇವ ಜಯತೆ ಪ್ರತಿಷ್ಠಾನದ ಎಂ.ಡಿ., ಬಹುಜನ ಹಿತರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೋಕಾಕ ತಾಲೂಕು ಘಟಕದ ಅಧ್ಯಕ್ಷೆ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಗೋಕಾಕ ತಾಲೂಕು ಘಟಕದ ಉಪಾಧ್ಯಕ್ಷೆಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕರ್ನಾಟಕ ಲೇಖಕಿಯರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘಗಳ ಆಜೀವ ಸದಸ್ಯತ್ವವನ್ನೂ ಹೊಂದಿದ್ದಾರೆ.


ಅವರ ಸಮಾಜಮುಖಿ ಕಾರ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಅನಾಥಾಶ್ರಮದ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದಾರೆ. ಗ್ರಾಮೀಣ ಸರಕಾರಿ ಶಾಲೆಗಳ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ‘ಸರಕಾರಿ ಶಾಲೆಗಾಗಿ ನಾವು–ನೀವು’ ಕಾರ್ಯಕ್ರಮವನ್ನು ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಸಿದ್ದಾರೆ. ಮಹಿಳಾ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿ, ಅತಿಥಿ ಉಪನ್ಯಾಸಕಿ ಹಾಗೂ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸುಮಾರು ೬,೦೦೦ ಮಾಸ್ಕ್‌ಗಳನ್ನು ಮನೆಯಲ್ಲಿಯೇ ಹೊಲಿದು, ಬಡವರು, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಪೌರಾಡಳಿತ ಇಲಾಖೆಯ ಕಾರ್ಮಿಕರಿಗೆ ಉಚಿತವಾಗಿ ವಿತರಿಸಿರುವುದು ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ. ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಗೋಕಾಕ ತಾಲೂಕು ಘಟಕದ ಉಪಾಧ್ಯಕ್ಷೆಯಾಗಿ ಉಚಿತ ರಕ್ತದಾನ ಶಿಬಿರ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ.


ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ವಿದ್ಯಾ ರೆಡ್ಡಿ ಅವರು ಶಾರ್ಟ್ ರನ್ನರ್ ಹಾಗೂ ಲಾಂಗ್ ಜಂಪ್ ಕ್ರೀಡಾಪಟುವಾಗಿ ಚಾಂಪಿಯನ್ ಪಟ್ಟ ಗಳಿಸಿದ್ದು, ಬೆಂಗಳೂರಿನ ಸೂಲಿಬೆಲೆಯಲ್ಲಿ ನಡೆದ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವುದು ಅವರ ಬಹುಮುಖ ಪ್ರತಿಭೆಗೆ ಮತ್ತೊಂದು ಸಾಕ್ಷಿಯಾಗಿದೆ.


ಅವರ ಕಥೆ, ಕವಿತೆ ಹಾಗೂ ಲೇಖನಗಳು ವಿವಿಧ ನಿಯತಕಾಲಿಕೆಗಳು ಮತ್ತು ಇ-ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಧಾರವಾಡ, ಕೆಎಲ್‌ಇ ವೇಣುಧ್ವನಿ ರೇಡಿಯೋ ಬೆಳಗಾವಿ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆಯ ಸಮುದಾಯ ಬಾನುಲಿ ಕೇಂದ್ರಗಳಲ್ಲಿ ಅವರ ಕಥೆಗಳು, ಲೇಖನಗಳು ಮತ್ತು ಸಂದರ್ಶನಗಳು ಪ್ರಸಾರಗೊಂಡಿವೆ. ಕವನ ಹಾಗೂ ಕಥಾ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.


ಸಾಹಿತ್ಯ ಅವರ ಉಸಿರಾದರೆ, ಸಮಾಜಸೇವೆ ಅವರ ಬದುಕಿನ ಧ್ಯೇಯ; ಸಂಘಟನೆ ಅವರ ಶಕ್ತಿ, ಸೃಜನಶೀಲತೆ ಅವರ ಅಸ್ತ್ರ. ಶಿಕ್ಷಕಿಯಾಗಿ ಜ್ಞಾನ ಹಂಚಿದವರು, ಸಾಹಿತಿಯಾಗಿ ಭಾವನೆಗಳಿಗೆ ಅಕ್ಷರ ರೂಪ ನೀಡಿದವರು, ಸಮಾಜಮುಖಿ ಕಾರ್ಯಕರ್ತೆಯಾಗಿ ಅಸಹಾಯರಿಗೆ ನೆರವಾದವರು ಹಾಗೂ ಸಂಘಟಕಿಯಾಗಿ ಹಲವರ ಪ್ರತಿಭೆಗೆ ವೇದಿಕೆ ಕಲ್ಪಿಸಿದವರು ಶ್ರೀಮತಿ ವಿದ್ಯಾ ರೆಡ್ಡಿ.


ಗೋಕಾಕದ ನೆಲದಿಂದ ಹೊರಹೊಮ್ಮಿದ ಈ ಬಹುಮುಖ ಪ್ರತಿಭೆ, ಕನ್ನಡ ಸಾಹಿತ್ಯ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ ಎಂಬುದು ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳ ಆಶಯವಾಗಿದೆ.

Comments
Show comments